ಅಬೆಲ್, ನೀಲ್ಸ್ ಹೆನ್ರಿ
	ನಾರ್ವೇದೇಶದ ಸುಪ್ರಸಿದ್ಧ ಗಣಿತಜ್ಞ (1802-1820). ಬದುಕಿದ್ದು 27 ವರ್ಷಗಳಿಗಿಂತಲೂ ಕಡಿಮೆ; ಕಾಯಿಲೆ, ಬಡತನ, ಹತಾಶೇ ಇವನ ನಿರಂತರ ಒಡನಾಡಿಗಳು; ಆದರೆ ಗಣಿತಶಾಸ್ತ್ರಕ್ಕೆ ಕೊಟ್ಟದ್ದು 500 ವರ್ಷಗಳ ಕಾಲ ಚಿಂತನ ಮಾಡುವಷ್ಟು ವಿಷಯವನ್ನು. ಶಾಲಾದಿವಸಗಳಲ್ಲಿಯೇ ಇವನ ಗಣಿತಪ್ರತಿಭೆ ವಿಕಾಸಗೊಂಡಿತ್ತು. 1823ರಲ್ಲಿ ಅವನಿಗೆ ಕೇವಲ 21 ವರ್ಷ ಪ್ರಾಯವಾಗಿದ್ದಾಗಿ ಫಂಕ್ಷನಲ್ ಈಕ್ವೇಷನ್ಸ್, ಇಂಟೆಗ್ರಲ್ಸ್ ಮತ್ತು ಫಸ್ಟ್ ಇನ್‍ಸ್ಟೆನ್ಸ್ ಆಫ್ ದಿ ಸೊಲ್ಯೂಷನ್ ಆಫ್ ಎನ್ ಇಂಟೆಗ್ರಲ್ ಈಕ್ವೇಷನ್ ಈ ವಿಷಯಗಳನ್ನು ಕುರಿತು ಒಂದು ಪ್ರಬಂಧ ಪ್ರಕಟಿಸಿದ. ಆಯ್ಲರ್ ಕ್ರಮದಲ್ಲಿ ಬೆಳೆದು ಬಂದಿದ್ದ ಅಬೆಲ್ ಮುಂದೆ ಜರ್ಮನಿಯ ಗಾಸ್ ಮತ್ತು ಕಾಶಿ ಎಂಬ ಸುಪ್ರಸಿದ್ಧ ಗಣಿತಜ್ಞರ ಹೊಸ ವಿಚಾರಸರಣಿಯಿಂದ ಪ್ರಭಾವಿತನಾದ. ಇವನ ಕೊಡುಗೆಗಳಲ್ಲಿ ಗಮರ್ನಾವಾದ ಪ್ರಬಂಧಗಳು ಎಲ್ಲಿಪ್ಟಿಕ್ ಫಂಕ್ಷನ್ಸ್ ಮತ್ತು ಥಿಯೊರಿ ಆಫ್ ಅಬೆಲಿಯನ್ ಈಕ್ವೇಷನ್ಸ್ ವಿತ್ ಅಬೆಲಿಯನ್ ಗ್ರೂಪ್ಸ್. ಕೀರ್ತಿ, ಆರ್ಥಿಕಸಹಾಯ ಒದಗಿಬಂದಾಗ ಕ್ಷಯರೋಗದಿಂದ ಜರ್ಜರಿತನಾದ ಅಬೆಲ್ ಅವನ್ನು ಸ್ವೀಕರಿಸಿ ಅನುಭವಿಸುವ ಸ್ಥಿತಿಯಲ್ಲಿರಲಿಲ್ಲ. ಏಪ್ರಿಲ್ 6, 1829ರಲ್ಲಿ ಮಡಿದ.   						

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ